Feb 4, 2017

ನಾಗಾವಿ ಪ್ರವಾಸ ~ Nagavi Pravasa

ಪ್ರವಾಸ ಎಂದರೆ ಯಾರಿಗಿಷ್ಟ ಇಲ್ಲ! ಹೊಸ ಊರು, ಹೊಸ ದೇಶ ನೋಡುವದು ಎಲ್ಲರ ಕನಸು. ಹಾಗೆ ನನಗೂ ಇಷ್ಟ. ಆದರೆ ಟ್ರಾವೆಲ್ಲಿಂಗ್ ಸಿಕ್ಕ್ನೆಸ್ಸ್ ಅನ್ನೋ ಒಂದು ಸಮಸ್ಯೆ ನನ್ನ ಯಾವಾಗಲೂ ಕಾಡ್ತಾ ಇರುತ್ತೆ. ಸಿದ್ದಿ ಯಾವದೋ ಕೆಲಸದ ಮೇಲೆ ಧಾರವಾಡಕ್ಕೆ ಹೋಗ್ಬೇಕು, ಹೋಗವಾಗ ಕೆಲವು ಜಾಗಗಳನ್ನು ನೋಡ್ಕೊಂಡ ಹೋಗಣ ಅಂತ ಹೇಳಿದ್ರು. ಅದರಂತೆ ನಾವು ಯಾವ ಜಾಗಗಳನ್ನು ನೋಡಬಹುದು ಅಂತ ಹಿಂದಿನ ದಿನನೇ ಕುತ್ಕೊಂಡು ರಿಸರ್ಚ್ ಮಾಡಿ ಲಿಸ್ಟ್ ಮಾಡ್ಕೊಂಡು, ಪ್ಯಾಕಿಂಗ್ ಎಲ್ಲ ಮಾಡ್ಕೊಂಡು ತಯಾರಾದ್ವಿ.

ಜೂಲೈ ೨, ೨೦೧೬ -
 ಬೆಳಿಗ್ಗೆ ೫ ಗಂಟೆಗೆ ನಮ್ಮ ಕಾರು ಹೈದೆರಾಬಾದ್ ಬಿಟ್ಟಿತು. ಹೈದೆರಾಬಾದಿನಿಂದ ೭೦-೭೫ ಕಿ ಮೀ  ಹೊರಗೆ ಬಂದಿರಬೇಕು ನನಗೆ ತಲೆಸುತ್ತು ಶುರುವಾಯ್ತು, ಒಂದೆರಡು ಸಲ ವಾಂತಿಯು ಆಯಿತು. ಆಮೇಲೆ ಕಾರಲ್ಲೇ ಮಲಗಿದೆ. ಸಿದ್ದಿ ಡ್ರೈವಿಂಗ್ ಮುಂದುವರೆಸಿದ್ರು. ಸಿದ್ದಿ -ನಾನು ಮದ್ವೆ ಆಗಿ ಒಂದೂವರೆ ವರ್ಷ ಆಗಿದೆ, ಇಷ್ಟು ದಿನದಲ್ಲಿ ನಾವು ಗೋವಾ, ಊಟಿ, ಕೊಡಗು ಅಂತ ನೀರು & ತಂಪು ಇರುವಂತಹ ಜಾಗಗಳಿಗೆ ಹೋಗಿಲ್ಲ. ಸಿದ್ದಿಗೆ ಐತಿಹಾಸಿಕ ಜಾಗಗಳ ಕುರಿತು ಆಸಕ್ತಿ ಇರುವದರಿಂದ ಬರಿ ಕೋಟೆ-ಕೊತ್ತಲು, ಗುಡ್ಡ-ಬೆಟ್ಟ, ಹಾಳು ಬಿದ್ದ ಊರು, ಹಳೆಯ ದೇವಸ್ಥಾನಗಳನ್ನು ನೋಡಲು ಹೋಗುವದೇ ಜಾಸ್ತಿ. ನನಗೆ ಇವುಗಳಲ್ಲಿ ಆಸಕ್ತಿ ಅಷ್ಟೊಂದಿಲ್ಲ ಆದರೂ ಹೋದಾಗ ನೋಡಲು ಇಷ್ಟ ಪಡುತ್ತೇನೆ.

ಇವತ್ತಿನ ಪ್ರವಾಸ ಕೂಡ ಅಂತಹ ಜಾಗಗಳಿಗೆ ಅಂತ ನನಗೆ ತಿಳಿದಿತ್ತು. ಕಡಿಮೆ ಮಾತಿನ ಪ್ರಯಾಣ ಮುಂದುವರೆದಿತ್ತು. ನಮ್ಮ ಕಾರು ಬೆಳಿಗ್ಗೆ ೮.೩೦ ಕ್ಕೆ ಸೇಡಂ ತಲುಪಿತು. ಅಲ್ಲಿಯೇ ಬೆಳಿಗಿನ ಉಪಹಾರ ಮಾಡಿಕೊಂಡೆವು. ನಾವು ಮೊದಲೇ ನಿರ್ಧರಿಸಿ ಪಟ್ಟಿಮಾಡಿಕೊಂಡ ಜಾಗಗಳಲ್ಲಿ ಸೇಡಂ ಕೂಡ ಒಂದು. ರಿಸರ್ಚ್ ಪ್ರಕಾರ ಅಲ್ಲಿ ಕೆಲವು ಹಳೆಯ ದೇವಸ್ಥಾನಗಳು, ಜೈನ ಬಸ್ತಿಗಳನ್ನು ನೋಡಬೇಕೆಂದು ಹೊರಟೆವು.ಊರೊಳಗೆ ಹೋದಂತೆ ರಸ್ತೆಗಳು ತುಂಬಾ ಇಕ್ಕಟ್ಟಿದಂತೆ ತೋರಿದವು, ಸಿದ್ದಿ ತುಂಬಾ ಕಷ್ಟ ಪಟ್ಟು ಕಾರನ್ನು ಪ್ರತಿಯೊಂದು ದೇವಸ್ಥಾನದ ಎದುರಿಗೆ ಒಯ್ದು ನಿಲ್ಲಿಸಿದ. ದೇವಸ್ಥಾನಗಳನ್ನು ನೋಡಿ ಫೋಟೋಗಳನ್ನು ತೆಗೆದುಕೊಂಡು ಸೇಡಂ ಬಿಟ್ಟೆವು.

ಕಾರು ಚಿತ್ತಾಪುರದೆಡೆಗೆ ಸಾಗಿತು, ಚಿತ್ತಾಪುರ ತಲುಪಿದ ಮೇಲೆ ನಾಗಾವಿಗೆ ಯಾವ ಕಡೆ ಹೋಗಬೇಕೆಂದು ತಿಳಿಯದಾಗಿ, ಸಿದ್ದಿ ಮ್ಯಾಪ್ ನೋಡಲು ಹೇಳಿದರು, ನನಗೆ ಹೇಳಲು ತಿಳಿಯದಾದಾಗ ಕಾರನ್ನು ಸೈಡ್ ಹಾಕಿ ತಾವೇ ನೋಡಿ ಯಾವ ಕಡೆ ಹೋಗಬೇಕೆಂದು ಗುರುತು ಮಾಡಿಕೊಂಡು ಕಾರನ್ನು ಆ ಕಡೆ ತಿರುಗಿಸಿದರು. ನಾನು ನಾಗಾವಿ ಕುರಿತು ರಿಸರ್ಚ್ ಮಾಡುವಾಗ ಓದಿದ್ದ ನೆನಪಿತ್ತು, ಅಲ್ಲಿ ಒಂದು ಹಳೆಯ ಯೂನಿವರ್ಸಿಟಿ ಇತ್ತೆಂದು ಹಾಗೂ ಬೆಂಕಿ ಮಳೆಯಾಗಿ ಹಳೆಯ ನಾಗಾವಿ ಊರು ಹಾಳು ಬಿದ್ದಿದೆ ಎಂದು. ಅಲ್ಲಿ ಏನೋ ಸ್ವಲ್ಪ ಇಂಟೆರೆಸ್ಟಿಂಗ್ ನೋಡೋಕೆ ಸಿಗಬಹುದು ಅಂತ ನನಗೆ ಗೊತ್ತಿತ್ತು.

ಕಾರು ನಾಗಾವಿ ತಲುಪಿದಾಗ ಸಮಯ ಸರಿಯಾಗಿ ೧೨.೩೦ ಮಧ್ಯಾಹ್ನವಾಗಿತ್ತು. ಹೊಸ ಊರಿಂದ ಸ್ವಲ್ಪ ಮುಂದೆ ಬಂದೊಡನೆ ಅಲ್ಲಿಯೇ ರೇಲ್ವೆ ಬ್ರಿಜ್ ಕಾಣಿಸಿತು ಅದರಿಂದ ಸ್ವಲ್ಪ ಮುಂದೆ ಒಂದು ಫಲಕ ಕಣ್ಣಿಗೆ ಬಿತ್ತು. 'ನಾಗಾವಿ ಎಲ್ಲಮ್ಮನ ಗುಡಿ' ಎಂದು ಬರೆದು ಗುಡಿಗೆ ಹೋಗುವ ದಾರಿಯನ್ನು ತೋರಿಸುತಿತ್ತು. ಬ್ರಿಜ್ ಇಂದ ಗುಡಿಗೆ ೫ ಕಿ ಮೀ ಇರಬಹುದು.ನಾವು ಮೊದಲು ಗುಡಿ ನೋಡಿಕೊಂಡು ಆಮೇಲೆ ಹಳೆಯ ಯೂನಿವರ್ಸಿಟಿ ನೋಡೋಣ ಎಂದುಕೊಂಡು ಗುಡಿ ಇರುವೆಡೆಗೆ ಕಾರು ನಡೆಸಿದೆವು. ಕಾರ್ ಪಾರ್ಕ್ ಮಾಡಲು ಗುಡಿಯ ಎದುರಿಗೆ ಜಾಗವಿತ್ತು, ಅಲ್ಲೇ ಕೈ ಕಾಲು ತೊಳೆದು ಗುಡಿಯ ಒಳನಡೆದೆವು. ಒಳಗೆ ಕಾಲಿಡುತ್ತಿದ್ದಂತೆ ನೊಣಗಳ ಗುಂಪೇ ಗೊಂಯ್......... ಎಂದು ಸದ್ದು ಮಾಡುತ್ತಾ ಎದ್ದವು.ಅಬ್ಬಾ! ಗುಡಿಯೇನೋ ವಿಶಾಲವಾಗೇ ಇದೆ, ದೊಡ್ಡ ಮರದ ನೆರಳು, ದೊಡ್ಡ ಹಳೆಯ ಯಜ್ನ್ಯ ಕುಂಡಗಳು ಆದರೆ ಎಷ್ಟೊಂದು ಗಲೀಜು. ಸವದತ್ತಿ ಎಲ್ಲಮ್ಮನ ಗುಡಿಯ ನೆನಪು ಒಮ್ಮೆಲೇ ಬಂದು ಹೋಯ್ತು. ನಾನು ಯೋಚಿಸುತ್ತ ನಿಂತೇ ಎಲ್ಲ ಎಲ್ಲಮ್ಮನ ಗುಡಿಗಳನ್ನು ಇಷ್ಟೊಂದು ಗಲೀಜಾಗಿ ಯಾಕಿಡ್ತಾರೆ ಅಂತ. ತೆಂಗಿನ ಕಾಯಿಯನ್ನು ತಮಗಿಷ್ಟ ಬಂದಲ್ಲಿ ಒಡೆದು ಜಾಗವನ್ನೆಲ್ಲ ಅಂಟಂಟು ಮಾಡಿದ್ದರು, ಅಲ್ಲಲ್ಲಿ ಹಳೆಯ ಹರಕಲು ಬಟ್ಟೆಗಳು ಬಿದ್ದಿದ್ದವು, ಗುಡಿಯ ಒಳಾಂಗಣದ ಕಟ್ಟೆಗಳ ಮೇಲೆ ಜೋಗಮ್ಮರೂ ಬುಟ್ಟಿಯಲ್ಲಿ ಎಲ್ಲಮ್ಮನ ಮೂರ್ತಿಯನ್ನು ಇಟ್ಟುಕೊಂಡು ಕುಳಿತಿದ್ದರು. ನನಗೆ ಒಳಗೆ ಜಾಸ್ತಿ ಹೊತ್ತು ನಿಲ್ಲಲಿಕ್ಕಾಗಲಿಲ್ಲ. ನೊಣಗಳ ಕಾಟದಿಂದ ಹೊರಗೆ ಬಂದು ಬಿಟ್ಟೆ. ಸಿದ್ದಿ ಸ್ವಲ್ಪ ಹೊತ್ತು ಗುಡಿಯ ಒಳಗೆ ಫೋಟೋ ತೆಗೆದುಕೊಂಡು ಆಮೇಲೆ ಬಂದರು. ದೇವಸ್ಥಾನದ ಸ್ವಚ್ಛತೆಯ ಕುರಿತು ಮಾತನಾಡುತ್ತ ನಾನು ಸಿದ್ದಿ ಕಾರಲ್ಲಿ ಕುಳಿತು ಯೂನಿವರ್ಸಿಟಿ ನೋಡಲು ಹೊರಟೆವು.


ಎಲ್ಲಮ್ಮನ ಗುಡಿಯಿಂದ ಸುಮಾರು 4೦೦ ಮೀ ಮುಂದೆ ಬಂದ ನಂತರ ಒಂದು ದೊಡ್ಡ ಕಮಾನಿನ ಮೇಲೆ ಸಂಜೀವಿನಿ ಆಂಜನೇಯ ಗುಡಿ ಎಂದು ಬರೆದಿತ್ತು. ಅಲ್ಲಿಯೇ ಒಳಗೆ ನಡೆದೆವು. ತುಂಬಾ ವಿಶಾಲವಾದ ಜಾಗ. ನೋಡಲಿಕ್ಕೆ ಒಂಥರಾ ನ್ಯಾಚುರಲ್ ಆಂಫಿ ಥಿಯೇಟರ್ ಥರ ಕಾಣಿಸುತ್ತಿತ್ತು. ಸುತ್ತಲೂ ಕೆಲವು ಹಾಳು ಬಿದ್ದ ಗುಡಿಗಳಿದ್ದವು, ಅಲ್ಲಿ ಒಂದು ದೇವಸ್ಥಾನದಲ್ಲಿ ಮಾತ್ರ ಪೂಜೆ ನಡೆಯುತ್ತಿತ್ತು. ಅದೇ ಸಂಜೀವಿನಿ ಆಂಜನೇಯ ದೇವಸ್ಥಾನ.


ದೇವಾಲಯದ ಎದುರಿಗೆ ಒಂದು ದೊಡ್ಡದಾದ ದೀಪಸ್ಥಂಭವಿದ್ದು ದೇವಸ್ಥಾನವನ್ನು ಸ್ವಲ್ಪ ಎತ್ತರದಲ್ಲಿಯೇ ಕಟ್ಟಲಾಗಿದೆ, ಸುತ್ತಲೂ ಖಾಲಿ ಜಾಗವಿರುವದರಿಂದ ದೇವಾಲಯದ ಒಳಗೆ ಜೋರಾಗಿ ಗಾಳಿ ಬಿಸುತ್ತಿರುತ್ತೆ ಅಲ್ಲದೆ ತುಂಬಾ ತಂಪಾಗಿರುತ್ತೆ. ನಾನು ದೇವಾಲಯದ ಒಳಗೆ ಹೋಗಿ ನಮಸ್ಕಾರ ಮಾಡಿ ಅಲ್ಲೇ ಕುಳಿತು ಪೂಜಾರಿಯೊಡನೆ ಮಾತನಾಡಿ ನಾಗಾವಿ ಕುರಿತು ಕೇಳಿದಾಗ, ಅವರೂ ಕೂಡ ಅದನ್ನೇ ಹೇಳಿದರು, ಬೆಂಕಿ ಮಳೆಯಾಗಿ ಹಳೆಯ ಊರು ಹಾಳು ಬಿದ್ದು ಹೋಗಿದೆ. ಈಗ ನಾವಿರುವ ಜಾಗ ಮೊದಲು ಯೂನಿವೆರ್ಸಿಟಿಯಾಗಿತ್ತು. ಆ ಹಾಳು ಬಿದ್ದ ಊರು ಇದೆ ದೇವಸ್ಥಾನದ ಹಿಂದುಗಡೆ ಸುಮಾರು ೧೦೦ ಮೀ ನಡೆದರೆ ಸಿಗುತ್ತೆ ಎಂದು ಹೇಳಿದರು. ಅಸ್ಟೊತ್ತಿಗೆ ಅಲ್ಲಿಗೆ ಬಂದ ಇಬ್ಬರು ಹಣ್ಣು-ಕಾಯಿ ತಂದು ಪೂಜೆ ಮಾಡಿಸಿಕೊಂಡು ತಾವು ತೆರೆಯುತ್ತಿರುವ ಹೊಸ ಅಂಗಡಿ ಚನ್ನಾಗಿ ನಡೆಯಲಿ ಎಂದು ಪೂಜಾರಿಯಿಂದ ಆಶೀರ್ವಾದ ಪಡೆದು ಹೊರಟರು. ಅಷ್ಟರಲ್ಲಿ ಸಿದ್ದಿ ಹೊರಗಿನ ದೇವಾಲಯ, ದೀಪಸ್ಥಾಮಭದ ಫೋಟೋ ತೆಗೆದುಕೊಂಡು ಒಳಗೆ ಬಂದರು. ದೇವರಿಗೆ ನಮಸ್ಕಾರ ಮಾಡಿ ಅಲ್ಲಿಂದ ಹಾಳುಬಿದ್ದ ಊರು ನೋಡಲು ಹೊರಟೆವು. ಕಾರ್ ದೇವಸ್ಥಾನದ ಎದುರಿಗೆ ಪಾರ್ಕ್ ಮಾಡಿ ನಡೆದುಕೊಂಡು ಹೋಗುವುದೇ ಉಚಿತವೆನಿಸಿ ನಿರ್ಧರಿಸಿ ಅದರಂತೆ ಮಾಡಿದೆವು.


ಕೆಲವೇ ನಿಮಿಷಗಳು ನಡೆದ ನಂತರ ಹಾಳು ಬಿದ್ದ ಕೋಟೆಯ ಗೋಡೆ, ಹಾಗೂ ಕಾಲು ದಾರಿಗಳು ನಮ್ಮನು ಮುನ್ನಡೆಸಿದವು. ಬರಿ ಹುಲ್ಲು ಕಸ ಬೆಳೆದಿರುವದು ಬಿಟ್ಟರೆ, ಈಗಿನ ಹೊಸ ನಾಗಾವಿಯಲ್ಲಿರುವಂತೆ, ಅಥವಾ ಎಲ್ಲಮ್ಮನ ಗುಡಿಯಲ್ಲಿರುವಂತೆ ಇಲ್ಲಿ ಯಾವುದೇ ಮಲೀನತೆ ಇಲ್ಲ. ಸ್ವಲ್ಪ ಮುಂದೆ ನಡೆದ ನಂತರ ಬಲಬದಿಗೆ ಒಂದು ಹಳೆಯ ದೇವಾಲಯದ ಕಟ್ಟಡವನ್ನು ಕಾಣಬಹುದು, ಹಾಳು ಬಿದ್ದಿದೆ, ಅದರ ಪಕ್ಕಕ್ಕೆ ಇನ್ನೊಂದು ಕಟ್ಟಡದ ಕೆಳಗೋಡೆಗಳ ಕೆತ್ತನೆಗಳು ಚಾಲುಕ್ಯರ ಶೈಲಿಯನ್ನು ಹೊಂದಿವೆ, ಮೇಲೆ ಮಾತ್ರ ಮುಸ್ಲಿಂ ಶೈಲಿಯ ಮಿನಾರ್ ಕಾಣಬಹುದು. ಚಾಲುಕ್ಯರ ಕಾಲದಲ್ಲಿ ದೇವಾಲಯಗಳಿದ್ದು ಅನಂತರ ಮುಸ್ಲಿಂ ಆಡಳಿತ ಬಂದಾಗ ಮಸೀದಿಗಳಾಗಿ ಮಾರ್ಪಾಡಾಗಿರಬಹುದೆಂಬ ಊಹೆ. ಅಲ್ಲಿಯೇ ಹತ್ತಿರದಲ್ಲೇ ಹಳೆಯ ಕಲ್ಲಿನ ಬಾವಿ, ಅದಕ್ಕೆ ಕಲ್ಲಿನ ಮೆಟ್ಟಿಲುಗಳು ಕೂಡ. ನನಗೆ ತುಂಬಾ ಆಕರ್ಷಕವಾಗಿ ಕಂಡದ್ದು ಅದೇ. ಶಾಲೆಯಲ್ಲಿ ಇತಿಹಾಸದಲ್ಲಿ ಹರಪ್ಪ ಮೆಹೆಂಜೋದಾರ ನಗರಗಳ ಕುರಿತು ತುಂಬಾ ಆಸಕ್ತಿಯಿಂದ ಓದಿದ್ದ ನನಗೆ ಈ ಬಾವಿ, ಕಟ್ಟಡ ವಿನ್ಯಾಸ ನೋಡಿದ ತಕ್ಷಣ ಅದೇ ತಲೆಯಲ್ಲಿ ಸುಳಿದು ಹೋಯಿತು.ಅಲ್ಲಿಯ ಫೋಟೋ ತೆಗೆದುಕೊಂಡು ಮುಂದೆ ನಡೆದಂತೆ ಎಡಗಡೆ ಕೋಟೆ ಗೋಡೆ ಬಿದ್ದು ಹೋಗಿ ಆ ಕಡೆಯ ಅರ್ಧಬಿದ್ದ ಮನೆಯ ಗೋಡೆಗಳು ಕಾಣುತ್ತಿದ್ದವು, ಪೂಜಾರಿಯು ಹೇಳಿದ್ದ ಹಾಗೆ ಎಡಗಡೆ ನಾಗಾವಿ ಊರಿತ್ತು ಬೆಂಕಿಮಳೆಯಿಂದಾಗಿ ಹಾಳು ಬಿದ್ದು ಹೋಗಿತ್ತು. ತುಂಬಾ ಶಿಸ್ತುಬದ್ಧ ಊರೆನಿಸಿತು ನೋಡಿದ ತಕ್ಷಣ. ಅದನ್ನೇ ನೋಡುತ್ತಾ ಮುಂದೆ ನಡೆದವು ಬಲಗಡೆ ವಿಶಾಲವಾದ ಆಲದ ಮರ ಅದಕ್ಕೆ ಹತ್ತಿಕೊಂಡಂತೆ ಕಟ್ಟೆ, ನೋಡಿದರೆ ಪಂಚಾಯತಿ ಕಟ್ಟೆಯ ನೆನಪಾಗುತ್ತಿತ್ತು. ಹತ್ತಿರದಲ್ಲೇ ಒಬ್ಬ ಕುರಿ ಕಾಯುವ ಹುಡುಗ ಬೇವಿನ ಮರ ಏರಿ ಕುರಿಗಳಿಗೆ ಟೊಂಗೆಗಳನ್ನು ಮುರಿದು ಹಾಕುತ್ತಿದ್ದ.ಮುಂದೆ ನಡೆದಂತೆ ಮತ್ತೊಂದು ಕಟ್ಟಡದ ಅರ್ಧಭಾಗ ಉಳಿದಿತ್ತು, ಅದರ ವಿನ್ಯಾಸ ತುಂಬಾ ಆಕರ್ಷಣೀಯವಾಗಿದ್ದರು ಹತ್ತಿರ ಹೋಗಿ ನೋಡಲು ಸಾಧ್ಯವಾಗಲಿಲ್ಲ, ಕಾರಣ ಮುಳ್ಳಿನ ಕಂಟಿಗಳು ಸುತ್ತಲೂ ಬೆಳೆದಿದ್ದವು. ದೂರದಿಂದಲೇ ನೋಡಿ ಫೋಟೋ ತೆಗೆದುಕೊಂಡೆವು. ಅಷ್ಟೋತ್ತಿಗಾಗಲೇ ಗಾಳಿ ಮತ್ತು ಬಿಸಿಲಿಗೆ ಅರ್ಧ ಸುಸ್ತು ಹೊಡೆದಿದ್ದೆವು, ಇನ್ನೂ ಮುಂದೆ ಪ್ರಯಾಣ ಮಾಡಬೇಕಾದ ಕಾರಣ ಅಲ್ಲಿಂದ ಮರಳಿ ಪೂಜಾರಿ ಹೇಳಿದ್ದ ಮತ್ತೊಂದು ದೇವಸ್ಥಾನ ೬೦ ಕಂಬದ ಗುಡಿ ನೋಡಿಕೊಂಡು ಮುಂದೆ ಹೋಗೋಣವೆಂದು ನಿರ್ಧರಿಸಿ, ಆಂಜನೇಯ ಗುಡಿಯ ಹತ್ತಿರವಿದ್ದ ಕಾರನ್ನು ತೆಗೆದುಕೊಂಡು ೬೦೦ ಮೀ ದೂರದಲ್ಲಿರುವ ೬೦ ಕಂಬದ ಗುಡಿಗೆ ಬಂದೆವು.


ಗುಡಿಯು ತುಂಬಾ ಸುಂದರವಾಗಿದ್ದು ೬೦ ಕಂಬಗಳಿದ್ದವು. ಗರ್ಭಗುಡಿಯನ್ನು ಪ್ರವೇಶಿಸಿದ ತಕ್ಷಣ ಬಾವಲಿಗಳ ವಾಸನೆ ಮೂಗಿಗೆ ಅಡರಿತು. ದೇವಾಲಯವನ್ನು ನೋಡಿಕೊಳ್ಳಲು ಒಬ್ಬ ಹೆಂಗಸು ಇದ್ದು ಅವಳು ತೀರ್ಥ ಕೊಟ್ಟಳು. ದೇವಾಲಯದ ಫೋಟೋ-ವಿಡಿಯೋ ತೆಗೆದುಕೊಳ್ಳಲು ಅನುಮತಿ ಪಡೆದು, ಫೋಟೋ ತೆಗೆದುಕೊಂಡೆವು.ದೇವಾಲಯದ ಹೊರಗೆ ಒಂದು ಶಿಲಾಶಾಸನವಿತ್ತು. ಅದರ ಮೇಲಿರುವ ಲಿಪಿ ನೋಡಲಿಕ್ಕೆ ಕನ್ನಡದಂತಿತ್ತು. ನಾನು ಸಿದ್ದಿ ಅದನ್ನು ಕನ್ನಡ ಲಿಪಿ ಅಂತಾನೆ ತಿಳಿದಿದ್ದೆವು, ಅಲ್ಲಿಯೇ ಇದ್ದು ದೇವಾಲಯವನ್ನು ನೋಡಿಕೊಳ್ಳುತ್ತಿದ್ದ ಒಬ್ಬ ವ್ಯಕ್ತಿ ಅದು ನಾಗಲಿಪಿ, ಈ ಲಿಪಿಯು ಕನ್ನಡಕ್ಕಿಂತ ಮೊದಲಿತ್ತು ಎಂದು ಹೇಳಿದನು. ನಂತರ ಅಲ್ಲಿಯೇ ಕುಳಿತು ಊಟ ಮಾಡಿದೆವು. ಜಾಗವೇನೋ ಚೊಕ್ಕಟವಾಗೇ ಇತ್ತು, ನೊಣಗಳ ಹಾವಳಿ ಜಾಸ್ತಿಯಿತ್ತು. ಹಾಗೆ ಊಟ ಮುಗಿಸಿ ಅಲ್ಲೇ ದೇವಾಲಯದ ಹಿಂದೆ ಇರುವ ನಂದಿ ಬಾವಿ ನೋಡಲು ಹೋದೆವು. ಅಲ್ಲಿ ತುಂಬಾ ಹುಡುಗರು ಸ್ನಾನ ಮಾಡುತ್ತಿದ್ದರಿಂದ ಗದ್ದಲ ಜಾಸ್ತಿ ಇದ್ದು ಸರಿಯಾಗಿ ನೋಡಲಾಗಲಿಲ್ಲ. ಅಲ್ಲಿಂದ ಸುಮ್ಮನೆ ಮರಳಿ ಕಾರು ಫಿರೋಜಾಬಾದ್ ಕಡೆಗೆ ಸಾಗಿತು.....


(ನಾನು ಒಳ್ಳೆಯ ಓದುಗಾರ್ತಿ. ಎಷ್ಟು ಪುಸ್ತಕಗಳನ್ನು ಬೇಕಾದರೂ ತಾಳ್ಮೆಯಿಂದ ಓದುತ್ತೇನೆ. ಅದೇ ತಾಳ್ಮೆ ಬರೆಯುವದರಲ್ಲಿ ಇಲ್ಲ. ಈ ಪ್ರವಾಸ ಯಾಕೋ ಇಷ್ಟವಾಗಿ ಬರೆಯಬೇಕೆಂದೆನಿಸಿತು.ಆ ಹುರುಪಿನಲ್ಲಿ ಬರೆಯಲು ಕುಳಿತೆ. ಅರ್ಧ ಬರೆದ ಮೇಲೆ ಆಸಕ್ತಿ ಹೊರಟು ಹೋಯ್ತು, ಮತ್ತೆ ಎಷ್ಟೋ ದಿನಗಳಾದ ಮೇಲೆ ಸಿದ್ದಿ ಒತ್ತಾಯ ಮಾಡಿ ಬರೆದು ಮುಗಿಸಲು ಹೇಳದಿದ್ದರೆ, ನಾನು ಈ ಕಡೆ ಆಸಕ್ತಿ ತೋರಿಸುತ್ತಲೇ ಇರಲಿಲ್ಲವೇನೋ!!! ಅಂತೂ ನನ್ನ ನಾಗಾವಿ ಪ್ರವಾಸದ ಕಥನವನ್ನು ಚಿಕ್ಕದಾಗಿ ಬರೆದು ಮುಗಿಸಿದ್ದೇನೆ. ಬರವಣಿಗೆಯೆಡೆಗೆ ನನ್ನ ಪುಟ್ಟ ಹೆಜ್ಜೆ ಈ ಪ್ರವಾಸದ ಕಥನ)
.........

6 comments:

Unknown said...

Unfortunately i cannot read kannada. Can you translate the Nagavi Pravasa article. Thanks
Devkinandan

siddeshwar said...

Thanks for checking out this post, Davide. You can try Google Translate :)

Unknown said...

Its really wonderful!!

siddeshwar said...

Thank you, Saraswati.

ರವೀಂದ್ರ ಡಮ್ಮಣ್ಣ said...

ಈ ದಿನ ನಾವು ನಾಗಾವಿಗೆ ಸ್ನೇಹಿತರ ಕುಟುಂಬದೊಂದಿಗೆ ಪ್ರವಾಸ ಹೋಗಿದ್ದೆವು. ಅವರದು ಚಿತ್ತಾಪುರ ಈಗ ಯಾದಗಿರಿಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಮಗಳಿಗೆ 60 ಕಂಬದ ದೇವಸ್ಥಾನ ತುಂಬಾ ಇಷ್ಟವಾಯಿತು.

siddeshwar said...

ರವೀಂದ್ರಾವರೇ, ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯಿತು.